ಸೋಮವಾರಪೇಟೆ ತಾಲೂಕಿನ ಕೊಡಗರಹಳ್ಳಿಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. 

ಗ್ರಾಮದ ರಾಧಾ(55) ಗಾಯಾಳು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಬೆಳಗ್ಗೆ 9 ಗಂಟೆಯಲ್ಲಿ ಕೊಡಗರಳ್ಳಿಯ ಐಬಿಸಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಧಾ ಅವರ ಮೇಲೆ ಒಂಟಿ ಸಲಗವೊಂದು ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸೊಂಡಿಲಿನಿಂದ ಎತ್ತಿ ಎಸೆದಿದ್ದು, ಅವರ ಕೈ, ಕಾಲು ಹಾಗೂ ಸೊಂಟದ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ವೇಳೆ ಇತರ ಕಾರ್ಮಿಕರು ಸ್ಥಳದಿಂದ ಓಡಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.