ಕಾಡು ಪ್ರಾಣಿಗಳ ಜೀವಕ್ಕೆ ಎರವಾಗುವ ಉರುಳಿಗೆ ಅರಿಯದೇ ಕೊರಳೊಡ್ಡಿದ ಚಿರತೆಯೊಂದು ಅಸು ನೀಗಿರುವ ಘಟನೆ ಸುಂಟಿಕೊಪ್ಪ ಸಮೀಪದ ತೋಟವೊಂದರಲ್ಲಿ ಸಂಭವಿಸಿದೆ. ಬೇಟೆ ಅರಸಿ ಬಂದಿದ್ದ ಅಂದಾಜು 7 ರಿಂದ 8 ವರ್ಷ ಪ್ರಾಯದ ಗಂಡು ಚಿರತೆ ಯಾರೋ ಅಳವಡಿಸಿದ ಉರುಳಿಗೆ ಸಿಲುಕಿ ಇಹಲೋಕ ತ್ಯಜಿಸಿದೆ. ಅಳಂಬೆ ಅರಸಿಕೊಂಡು ಹೋಗಿದ್ದ ಕಾರ್ಮಿಕನೋರ್ವನಿಗೆ ಮೊದಲು ಈ ಘೋರಕೃತ್ಯ ಕಂಡುಬಂದಿದೆ. ನಂತರ ದೊರೆತ ಮಾಹಿತಿ ಮೇರೆಗೆ ಸುದ್ಧಿಗಾಗಿ ಸ್ಥಳ ಅರಸಿಕೊಂಡು ನಾವು ಘಟನಾ ಜಾಗಕ್ಕೆ ಹೋಗುವವರೆಗೂ ಚಿರತೆಯು ತಂತಿಯ ಕುಣಿಕೆಗೆ ಆಹುತಿಯಾಗಿರುವ ಪ್ರಕರಣ ತೋಟದಲ್ಲಿರುವವರ ಹೊರತು ಪಡಿಸಿ ಸುತ್ತಮುತ್ತಲಿನ ನಿವಾಸಿಗಳ ಗಮನಕ್ಕೂ ಬಾರದೇ ಗೌಪ್ಯವಾಗಿತ್ತು.
ಇಂದು ಬೆಳಿಗ್ಗೆ ಸುಂಟಿಕೊಪ್ಪ *ಮತ್ತಿಕಾಡು ಸಮೀಪದ ಕೃಷ್ಣ ಎಸ್ಟೇಟ್ (ಬೀಬಿ ಪ್ಲಾಂಟೇಷನ್)* ನಲ್ಲಿದ್ದವರಿಗೆ ಆಘಾತಕಾರಿ ಸುದ್ಧಿಯೊಂದು ಕೇಳಿಬಂದಿತ್ತು. ತೋಟದ ಕಾರ್ಮಿಕ ಚಿನ್ನಪ್ಪ ಎಂಬುವವರು ಬೆಳಿಗ್ಗೆ 9 ಗಂಟೆಗೆ ನಾಯಿಕೊಡೆಯನ್ನು ಅನ್ವೇಷಿಸಿಕೊಂಡು ಕಾರ್ಮಿಕರ ಲೈನ್ ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ತೋಟದ ನಡುವೆ ಬೇಲಿ ಬದಿಯಲ್ಲಿ ಸಾಗುತ್ತಿದ್ದಾಗ ಯಾರೋ ಬೇಲಿಗೆ ಅಳವಡಿಸಿದ್ದ ತಂತಿಯ ಉರುಳಿಗೆ ಚಿರತೆಯ ಕುತ್ತಿಗೆ ಸಿಲುಕಿ ಮೃತಪಟ್ಟಿರುವುದು ಕಂಡುಬಂದಿದೆ. ಕೂಡಲೇ ಅವರು ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮಾಲೀಕರು ಸಂಬಂಧಿಸಿದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ. ರಾತ್ರಿಯ ವೇಳೆ ಯಾರೋ ಬೇಲಿಗೆ ಉರುಳನ್ನು ಅಳವಡಿಸಿದ್ದು, ಅದರ ಅರಿವು ಇಲ್ಲದೇ ಬೇಲಿ ದಾಟುವಾಗ ಆಕಸ್ಮಿಕವಾಗಿ ಕುಣಿಕೆಗೆ ಕುತ್ತಿಗೆ ಬಿಗಿದುಕೊಂಡಿದೆ. ಉರುಳಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದೇ ಚಿರತೆ ಉಸಿರುಗಟ್ಟಿ ಇಹಲೋಕ ತ್ಯಜಿಸಿದೆ. ಮೃತಪಟ್ಟಿರುವ ಗಂಡು ಚಿರತೆ ಅಂದಾಜು 7 ರಿಂದ 8 ವರ್ಷ ಪ್ರಾಯದೆಂದು ಅಂದಾಜಿಸಲಾಗಿದೆ. (ಕೃತಜ್ಞತೆ : ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಲು ನೆರವಾದ ಪಿ.ಎಂ. ಷಂಶುದ್ದೀನ್ ರಾಯಲ್ ಕಾರ್ ಮತ್ತು ಇರ್ಷಾದ್ ಅಬ್ಬಾಸ್ ರವರಿಗೆ)
Report. source *ಕ್ಯೂಟ್ ಕೂರ್ಗ್ ಫ್ರೀ ಲ್ಯಾನ್ಸರ್ ನ್ಯೂಸ್*