ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಿದ್ದಾಪುರ ಬಳಿ ಮಳೆಯಿಂದಾಗಿ ಮನೆ ಕುಸಿದಿದೆ. ತಂತಿಪಾಲ ಬಳಿಯಲ್ಲಿ ಪ್ರವಾಹದಲ್ಲಿ ಕೆಲವರು ಕೊಚ್ಚಿಕೊಂಡು ಹೋಗಿರುವ ಶಂಕೆಯಿದ್ದು, ಹಲವರನ್ನು ರಕ್ಷಿಸಲಾಗಿದೆ. 

ಮಡಿಕೇರಿ ಮುತ್ತಪ್ಪ ದೇವಸ್ಥಾನ ಬಳಿಯಲ್ಲಿ ಭೂಕುಸಿತಗೊಂಡು ಮನೆ ನೆಲಕಚ್ಚಿದೆ. ಕಾಟಕೇರಿ ಗ್ರಾಮದಲ್ಲಿ ಭೂಕುಸಿತಗೊಂಡಿದ್ದು, ಯಶವಂತ್, ವೆಂಕಟರಮಣ, ಪವನ್ ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ. 

ರಕ್ಷಣೆಗೆ ಹೆಲಿಕಾಪ್ಟರ್‌ 

ಕೊಡಗಿನ ಜನರ ರಕ್ಷಣೆಗೆ ಸೇನಾ ಹೆಲಿಕಾಪ್ಟರ್ ಹೋಗಲಿದೆ. ಎಮ್ಮೆತ್ತಾಳು, ಮೇಘತ್ತಾಳು ಗ್ರಾಮದ ಜನರ ರಕ್ಷಣೆಗೆ ಹೆಲಿಕಾಪ್ಟರ್ ಬಳಸಲಾಗುತ್ತದೆ. ಜಿಲ್ಲಾಡಳಿತದ ಮನವಿ ಮೇರೆಗೆ ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಲಿದೆ. ಜನರ ರಕ್ಷಣೆಗೆ ಜಿಲ್ಲಾಡಳಿತ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ತಂತಿಪಾಲ, ಹಟ್ಟಿಕೊಳೆ ಭರ್ತಿ ಹಾಗೂ ಗುಡ್ಡಕುಸಿತದಿಂದ ನಡುವಲ್ಲಿ 60ಕ್ಕೂ ಹೆಚ್ಚು ಜನ ಸಿಲುಕಿದ್ದು, ಈಗಾಗಲೇ 20 ಜನರನ್ನು ರಕ್ಷಿಸಲಾಗಿದೆ. ಮಣ್ಣಿನಡಿ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೆಬ್ಬಾಲೆ ಕಣಿವೆ ರಸ್ತೆ ಯ ಮೇಲೆ 3 ಅಡಿ ನೀರು ಇದೆ. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಕುಶಾಲನಗರ,ಮಡಿಕೇರಿ, ವಿರಾಜಪೇಟೆ, ಕುಶಾಲನಗರಗಳ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಮಡಿಕೇರಿ ವಿರಾಜಪೇಟೆ, ಮಡಿಕೇರಿ ಮಂಗಳೂರು, ಮಡಿಕೇರಿ ಹಟ್ಟಿಹೊಳೆ, ಸೋಮವಾರಪೇಟೆ ಸಕಲೇಶಪುರ ರಸ್ತೆಗಳು ಬಂದ್‌ ಆಗಿವೆ. 

ಕಾಲೂರಿನಲ್ಲಿ ಜನರು ದ್ವೀಪದೊಳಗೆ ಸಿಲುಕಿದಂತಾಗಿದ್ದಾರೆ. ಇಡೀ ಕೊಡಗಿನಲ್ಲಿ ಎಲ್ಲಿಯೂ ವಿದ್ಯುತ್ ಇಲ್ಲದೆ ಸಂಕಷ್ಟವುಂಟಾಗಿದ್ದು, ಕುಡಿಯುವ ನೀರಿಗೂ ತೊಂದರೆಯಾಗಿದೆ. .

News Source:  Vijaya Karnataka