ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬೆನ್ನಲ್ಲೆ ಕೂದಲು ಉದುರಿದಕ್ಕೆ ಮನನೊಂದ ವಿದ್ಯಾರ್ಥಿಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ.ಮೈಸೂರಿನಲ್ಲಿ ಕಾಣೆಯಾಗಿದ್ದ ಕೊಡಗಿನ ವಿದ್ಯಾರ್ಥಿನಿ ಜಿ. ನೇಹಾ ಗಂಗಮ್ಮ (19) ನಿಟ್ಟೂರು ಲಕ್ಷ್ಮಣತೀರ್ಥ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿ ನಿಟ್ಟೂರು ಗ್ರಾಮದ ಪ್ರಭಾ, ಶೈಲಾ ದಂಪತಿಯ ಪುತ್ರಿ. ಶವ ಹೊರ ತೆಗೆದಿರುವ ಪೊನ್ನಂಪೇಟೆ ಪೊಲೀಸರು ಶವವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಿದ್ದಾರೆ. ಶನಿವಾರ ಸಂಜೆ ಹೊಳೆಯಲ್ಲಿ ಶವ ತೇಲುತ್ತಿದ್ದುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈಕೆ ಮೈಸೂರು ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಪದವಿ ವ್ಯಾಸಾಂಗ ಮಾಡುತ್ತಿದ್ದಳು. ಗೋಕುಲಂನಲ್ಲಿರುವ ಕೂರ್ಗ್ ಪಿಜಿಯಿಂದ ಕಾಲೇಜಿಗೆ ತೆರಳುವುದಾಗಿ ಎಂದು ಹೇಳಿ ಆಗಸ್ಟ್ 28 ರಂದು ತೆರಳಿದ್ದವಳು ಮರಳಿ ಬಂದಿರಲಿಲ್ಲ. ಹೀಗಾಗಿ ಪಿಜಿ ಮಾಲೀಕ ಕಾರ್ಯಪ್ಪ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಘಟನೆಗೆ ಹೇರ್ ಸ್ಟ್ರೈಟಿಂಗ್ ಕಾರಣ..

ಮೃತ ಯುವತಿ ಜಿ. ನೇಹಾ ಗಂಗಮ್ಮ ಮೈಸೂರಿನ ರೋಹಿಣಿ ಬ್ಯೂಟಿ ಝೋನ್ ನಲ್ಲಿ ಹೇರ್ ಸ್ಟ್ರೈಟಿಂಗ್ ಮಾಡಿಸಿಕೊಂಡಿದ್ದಳು. ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬಳಿಕ ಯುವತಿಯ ಕೂದಲು ಉದುರಲು ಆರಂಭಿಸಿದೆ. ಈ ವೇಳೆ ಮನನೊಂದ ಯುವತಿ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಆದರೆ ಆಕೆಯ ಪೋಷಕರು ಸಮಾಧಾನ ಪಡಿಸಿ ಕಾಲೇಜಿಗೆ ಕಳುಹಿಸಿದ್ದರು. ಎನ್ನಲಾಗಿದೆ.

ಆದರೆ ಯುವತಿ ನೇಹ ಗಂಗಮ್ಮ ಕೂದಲು ಉದುರುವಿಕೆಯಿಂದ ಮನನೊಂದು ಅಗಸ್ಟ್ 28ರಂದು ಲಕ್ಷ್ಮಣ ತೀರ್ಥ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ನೇಹಾ ಗಂಗಮ್ಮ ಪೋಷಕರು ರೋಹಿಣಿ ಬ್ಯೂಟಿ ಝೋನ್ ವಿರುದ್ದ ದೂರು ನೀಡಿದ್ದಾರೆ.